ಕ್ಲೇರ್, ಜಾನ್
 
1783-1864. ಆಂಗ್ಲಕವಿ. ಬಡ ಕೂಲಿಕಾರನೊಬ್ಬನ ಮಗನಾದ ಈತ ಪೀಟರ್‍ಬರೊ ಬಳಿಯಿರುವ ಹೆಲ್ಟ್ಸ್‍ಟನ್‍ನಲ್ಲಿ ಹುಟ್ಟಿದ. ಬಾಲ್ಯವನ್ನು ಹೊಲತೋಟಗಳ ಕೆಲಸದಲ್ಲಿ ಕಳೆದನಲ್ಲದೆ ಕೆಲಕಾಲ ಸೈನ್ಯಖಾತೆಯಲ್ಲಿ ದುಡಿದ. ಬಹಳ ಶ್ರಮದಿಂದ ಒಂದು ಪೌಂಡು ಉಳಿಸಿ ಅದರಿಂದ ತನ್ನ ಕವನಗಳ ಪರಿಚಯ ಪುಸ್ತಕವೊಂದನ್ನು ಹೊರತಂದ. ಸ್ಟಾಂಡರ್ಡ್‍ನ ಪುಸ್ತಕ ವ್ಯಾಪಾರಿಯಾದ ಡ್ರೂರಿಯನ್ನು ಕಂಡು ಆತನ ಸ್ನೇಹ ಸಂಪಾದಿಸಿ ಆತನ ಸಹಾಯದಿಂದ ಪೊಯಮ್ಸ್ ಡಿಸ್ಕ್ರಿಪ್ಟಿವ್ ಆಫ್ ರೂರಲ್ ಲೈಫ್ (1820) ಎಂಬ ಕವನ ಸಂಕಲನವನ್ನು ಹೊರತಂದ. ಈ ವ್ಯವಹಾರದಿಂದಾಗಿ ಈತನಿಗೆ 20 ಪೌಂಡು ಹಣ ಸಿಕ್ಕಿತಲ್ಲದೆ ಪುಸ್ತಕ ಅನೇಕರ ಗಮನವನ್ನು ಸೆಳೆಯಿತು. ಅನೇಕ ವಿದ್ವಾಂಸರ ಮತ್ತು ಹಿರಿಯರ ಸ್ನೇಹವೂ ಆಯಿತು. ವ್ಯವಹಾರ ತಿಳಿಯದವನಾದ್ದರಿಂದ ಕ್ಲೇರ್ ಅನೇಕ ಕಷ್ಟನಷ್ಟಗಳಿಗೆ ಈಡಾದ. ಆದರೂ ಕವನಗಳನ್ನು ಬರೆಯುವುದನ್ನು ನಿಲ್ಲಿಸಲಿಲ್ಲ. ಅದರ ಫಲವಾಗಿ ದಿ ವಿಲೇಜ್ ಮಿನ್ಸ್‍ಟ್ರೆಲ್ (1821), ದಿ ಷಪರ್ಡ್ಸ್ ಕ್ಯಾಲೆಂಡರ್ (1827), ರೂರಲ್ ಮ್ಯೂಸ್ (1835) ಕೃತಿಗಳು ಹೊರಬಂದುವು. ಅನಂತರ ಈತನ ಮಾನಸಿಕ ಸ್ಥಿತಿ ತೀರ ಇಳಿಮುಖವಾಗಿ ಬುದ್ಧಿಭ್ರಮಣೆಯಾಯಿತು. 1837ರಿಂದ ಹುಚ್ಚಾಸ್ಪತ್ರೆಯಲ್ಲಿ ಇರತೊಡಗಿದ. ಗ್ರಾಮೀಣ ಸೌಂದರ್ಯವನ್ನು ಚಿತ್ರಿಸುವಲ್ಲಿ ಕ್ಲೇರನನ್ನು ಮೀರಿಸಿದವರಿಲ್ಲ. ಹಳ್ಳಿಯ ಜನಜೀವನ, ಆ ಜನರ ನಿಷ್ಕಪಟ ಹೃದಯ ಮತ್ತು ಅವರ ಅಲೋಚನೆಗಳನ್ನು ತನ್ನ ಕವನಗಳಲ್ಲಿ ಮನೋಹರವಾಗಿ ಈತ ಚಿತ್ರಿಸಿದ್ದಾನೆ. 						(ಎನ್.ಎಸ್.ಎಲ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ